ಆರ್ ಕೆ ಪಿ ಎಂಬ ವಿಸ್ಮಯ

ಸಂಗೀತಗಾರರಲ್ಲಿ ಎರಡು ಸಿದ್ಧ ಮಾದರಿಗಳು ಕಾಣಸಿಗುತ್ತವೆ – ವೇದಿಕೆಯಲ್ಲಿ ರಾರಾಜಿಸುವ ತಾರಾಮೌಲ್ಯವುಳ್ಳ ಕಲಾವಿದರು ಮತ್ತು ಭವಿಷ್ಯದ ಕಲಾವಿದರನ್ನು ತಯಾರು ಮಾಡುವ ಗುರುಗಳು. ವೇದಿಕೆಯಲ್ಲಿಯೂ ಹೆಸರು ಮಾಡಿ ಭರವಸೆಯ ಕಲಾವಿದರನ್ನು ರೂಪಿಸುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುವ ಕಲಾವಿದರು ಕೆಲವರಷ್ಟೇ. ಈ ಎರಡೂ ಹೊಣೆಗಳನ್ನು ನಿಭಾಯಿಸಿ ಕ್ಷೇತ್ರದ ವಿಸ್ತಾರಕ್ಕಾಗಿ ಕಾರ್ಯಕ್ರಮಗಳ ಆಯೋಜನೆಯಲ್ಲೂ ತೊಡಗಿಕೊಂಡವರು ವಿರಳಾತಿವಿರಳವೇ. ಕಚೇರಿಗಳಲ್ಲಿ ಮಿಂಚಿ, ಉತ್ಕೃಷ್ಟ ಮಟ್ಟದ ಶಿಷ್ಯರನ್ನು ತಯಾರು ಮಾಡಿ, ಕಾರ್ಯಕ್ರಮ ಆಯೋಜನೆಯಲ್ಲಿ ಅನುಸರಿಸಲು ಅಸಾಧ್ಯ ಎಂದೇ ಹೇಳಬಹುದಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು, ಕಾದಂಬರಿಗಳನ್ನು, ಆತ್ಮಕತೆಯನ್ನು ಬರೆದು, ನಾಟಕಗಳಲ್ಲಿ ಅಭಿನಯಿಸಿ, ವಾಗ್ಗೇಯ ರಚನೆಗಳನ್ನು ಮಾಡಿ, ಸಂಗೀತಕ್ಕಾಗಿ ದೇವಸ್ಥಾನವನ್ನೂ, ಭವನವನ್ನೂ ಕಟ್ಟಿ, ಸಂಗೀತಕ್ಕಾಗಿ ಹಾತೊರೆಯುವ ನೂರಾರು ಜನರ ತಂಡವನ್ನು ಕ್ಷೇತ್ರಕ್ಕೆ ಅರ್ಪಿಸಿರುವುದು – ಆರ್ ಕೆ ಪಿ ಮಾತ್ರ. ನಾನು ಇಷ್ಟು ಹೇಳಿರುವುದೂ ಆರ್ ಕೆ ಪಿ ಅವರ ವ್ಯಕ್ತಿತ್ವದ ಕೆಲವು ಆಯಾಮಗಳನ್ನು ಮಾತ್ರ ಕಟ್ಟಿಕೊಟ್ಟಿವೆ ಎಂದೂ ನಿರ್ದಾಕ್ಷಿಣ್ಯವಾಗಿ ಹೇಳಿಬಿಡಬಲ್ಲೆ.


ಆರ್ ಕೆ ಪಿ ಯವರ ಆತ್ಮಕಥೆ ಅವರ ಜೀವನದ ಒಂದು ಪ್ರಸಂಗದಿಂದ ಶುರುವಾಗುತ್ತದೆ. ಇವರಿಗೆ ಈಜು ಬರುವುದಿಲ್ಲ – ಆದರೂ ಆಳದ ಹಳ್ಳಕ್ಕೆ ಧುಮುಕುತ್ತಾರೆ. ಅವರು ಇಡೀ ಜೀವನವನ್ನೇ ಹೀಗೆ ಕಳೆದಿದ್ದಾರೆಂದೆನಿಸುತ್ತದೆ. ಹೆಜ್ಜೆ ಹೆಜ್ಜೆಯಲ್ಲೂ ಈ ಭಂಡ ಧೈರ್ಯ ಅವರ ಜೊತೆಗಿದೆ. ಸಾಮಾನ್ಯವಾಗಿ ಸಂಗೀತದ ಕಲಿಕೆ ಎಳವೆಯಲ್ಲೇ ಶುರುವಾಗುತ್ತದೆ. ಆರ್ ಕೆ ಪಿ ಅವರಿಗೆ ಶಾಸ್ತ್ರೀಯ ಸಂಗೀತದ ಸಾಂಪ್ರದಾಯಿಕ ಶಿಕ್ಷಣ ದೊರೆತದ್ದು ಬಹಳ ತಡವಾಗಿಯೇ. ಅದರಲ್ಲಿಯೂ ಕೇಳಿ, ನೋಡಿ ಕಲಿತದ್ದೇ ಹೆಚ್ಚು. ಆದರೆ ಅದು ಕರ್ನಾಟಕ ಸಂಗೀತದ ದಿಗ್ಗಜರುಗಳ ಪಕ್ಕವಾದ್ಯದೊಂದಿಗೆ ಹಾಡುವಾಗಲೋ ಅಥವಾ ವಾಗ್ಗೇಯ ರಚನೆಗಳನ್ನು ಮಾಡುವಾಗಲೋ ಇವರಿಗೆ ಅಡ್ಡಿ ಬಂದದ್ದೇ ಇಲ್ಲ. ಶಿಷ್ಯರುಗಳನ್ನು ತಯಾರು ಮಾಡುವಾಗಲೂ ಅವರು ಇದೇ ಮಾದರಿ ಅನುಸರಿಸುತ್ತಾರೆಂದು ತೋರುತ್ತದೆ. ಅವರುಗಳನ್ನು ಕಠಿಣ ಸವಾಲುಗಳಿಗೆ ಒಡ್ಡಿ ಶಿಷ್ಯರು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದಾಗ ಸಂಭ್ರಮ ಪಡುವುದನ್ನು ನಾನೇ ಖುದ್ದು ನೋಡಿದ್ದೇನೆ.


೨೦೧೭ರ ಗಾನಕಲಾ ಪರಿಷತ್ತಿನ ಸಮ್ಮೇಳನವು ಮೈಸೂರಿನ ನಾದ ಮಂಟಪದಲ್ಲಿ ಜರುಗಿದಾಗ ಪೂರ್ವಭಾವಿಯಾಗಿ ನಾನು ಆರ್ ಕೆ ಪಿ ಅವರೊಂದಿಗೆ ಒಂದೆರಡು ದಿನ ಓಡಾಡಿದ್ದೆ. ಆಯೋಜಕರಾಗಿ, ಗುರುವಾಗಿ ಅವರ ಕಾರ್ಯ ವೈಖರಿಯನ್ನು ಹತ್ತಿರದಿಂದ ಗಮನಿಸುವ ಅವಕಾಶ ನನ್ನದಾಗಿತ್ತು. ಸೆಲ್ಫ್ ಹೆಲ್ಪ್ ಎಂಬ ಪ್ರಕಾರದ ಸಾಹಿತ್ಯದಲ್ಲಿ ‘The Magic of Thinking Big’ ಎಂಬ ಪುಸ್ತಕ ಜನಜನಿತವಾದದ್ದು. ಆ ಶೀರ್ಷಿಕೆಯನ್ನು ಆರ್ ಕೆ ಪಿ ಅವರು ಯೋಚಿಸುವ ಪರಿಯಿಂದಲೇ ಹೆಕ್ಕಿದ್ದಾರೇನೋ ಎನಿಸಿಬಿಟ್ಟಿತ್ತು. ಅವರಿಗೆ ಸಣ್ಣ ವಿಚಾರಗಳ, ಸಂಕುಚಿತ ಆಲೋಚನೆಗಳ ಜಾಡೇ ತಿಳಿದಿಲ್ಲವೇನೋ! ಮೈಸೂರಿನ ವಿದ್ವಾಂಸರನ್ನು ಸಮ್ಮೇಳನಕ್ಕೆ ಆಹ್ವಾನಿಸಲು ಮೀಸಲಿಟ್ಟ ದಿನ ಅದು. ಎಂದಿನಂತೆ ಆರ್ ಕೆ ಪಿ ಅವರೊಂದಿಗೆ ಶಿಷ್ಯರ ದಂಡು. ಪ್ರತಿ ವಿದ್ವಾಂಸರ ಮನೆಯಲ್ಲೂ ಸಣ್ಣದೊಂದು ಗಾನ ಗೋಷ್ಠಿ – ಜೊತೆಗಿದ್ದ ಶಿಷ್ಯರಿಗೆ ಸಂದರ್ಭಕ್ಕೆ ತಕ್ಕ ಕೃತಿಯನ್ನು ಹಾಡಲು ಅಲ್ಲೇ ಆದೇಶ ನೀಡುತ್ತಿದ್ದರು. ಹಾಡಿದ ನಂತರ ವಿದ್ವಾಂಸರಿಗೆ ಸಮ್ಮೇಳನಕ್ಕೆ ಪ್ರೀತಿಯ ಆಹ್ವಾನ. ಮನೆಯ ಮದುವೆಗೂ ಅಷ್ಟೊಂದು ಸಡಗರದ ಆಹ್ವಾನ ನೀಡುತ್ತಾರೋ ಇಲ್ಲವೋ ನನಗೆ ತಿಳಿಯದು. ಶಿಷ್ಯ ವೃಂದಕ್ಕೆ ಹಿರಿಯ ವಿದ್ವಾಂಸರ ಮುಂದೆ ಹಾಡಿ ಅವರ ಆಶೀರ್ವಾದ ಪಡೆದ ಸಾರ್ಥಕ ಅನುಭವ. ಪ್ರತಿಯೊಂದು ಸಂದರ್ಭವನ್ನೂ ಸಂಗೀತದ ಸಂದರ್ಭವನ್ನಾಗಿ ಪರಿವರ್ತಿಸುತ್ತಿದ್ದ ಆರ್ ಕೆ ಪಿ ಅವರ ಯೋಚನಾ ಲಹರಿಯನ್ನು ಕಂಡು ಬೆರಗಾದೆ! ಇನ್ನು ಸಮ್ಮೇಳನದ ಮೆರವಣಿಗೆಗಳಲ್ಲಿ ಆರ್ ಕೆ ಪಿ ಅವರು ಸಂಭ್ರಮಿಸುವುದನ್ನು ನೋಡಿಯೇ ತೀರಬೇಕು. ಶಾಸ್ತ್ರೀಯ ಸಂಗೀತದ ಸಂದರ್ಭಗಳೆಂದರೆ ದಂತದ ಗೋಪುರಗಳಲ್ಲಿ ಕುಳಿತು ಸಂಗೀತವನ್ನು ಆಸ್ವಾದಿಸುವ, ಹವಾ ನಿಯಂತ್ರಿತ ಸಭಾಂಗಣಗಳಲ್ಲಿ ಕುಳಿತು ರಾಗ ಲಕ್ಷಣಗಳ ಬಗ್ಗೆ ಚರ್ಚಿಸುವ ಬಿಗುಮಾನದ ಸಂದರ್ಭಗಳೆಂದು ಬಗೆಯುವವರು ಮೆರವಣಿಗೆಗಳಲ್ಲಿ ಆರ್ ಕೆ ಪಿ ಕಲಾ ತಂಡಗಳೊಂದಿಗೆ ಹೆಜ್ಜೆ ಹಾಕುವುದನ್ನು ನೋಡಬೇಕು! ಪರಿಷತ್ತಿನ ಸಮ್ಮೇಳನಗಳಲ್ಲಿ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೇ ಆರ್ ಕೆ ಪಿ ಯವರ ವಿಭಿನ್ನ ಯೋಚನಾ ಲಹರಿಗೆ ಸಾಕ್ಷಿ.


ಇನ್ನು ಪರಿಷತ್ತಿನ ಅಧ್ಯಕ್ಷರಾಗಿ ಎಲ್ಲರನ್ನೂ ಒಳಗೊಂಡು ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸಿರುವ ಮಾದರಿಯೂ ಅನುಕರಿಸಲು ದುಸ್ಸಾಧ್ಯವೇ. ಕಲಾವಿದರ, ಗೋಷ್ಠಿಗಳ ಆಯ್ಕೆಯಿಂದ ಹಿಡಿದು ಊಟೋಪಚಾರಗಳ ಆತಿಥ್ಯದವರೆಗೆ ಆರ್ ಕೆ ಪಿ ಯವರ ಶೈಲಿ ಅನುಭವ ವೇದ್ಯ. ಕಾರ್ಯಭಾರ ಎಷ್ಟೇ ಇದ್ದರೂ ಕಚೇರಿಗಳನ್ನು ಗಮನವಿಟ್ಟು ಕೇಳಿ ಕಚೇರಿಯ ಮುಖ್ಯಾಂಶಗಳನ್ನು ತಮ್ಮ ಮಾತುಗಳಲ್ಲಿ ಕಟ್ಟಿಕೊಡುವ ಪರಿಯೂ ಸಮ್ಮೇಳನಗಳಲ್ಲಿ ಭಾಗವಹಿಸಿರುವವರಿಗೆ ತಿಳಿದದ್ದೇ. ಕರ್ನಾಟಕದ ವಿದ್ವಾಂಸರನ್ನು, ಶಾಸ್ತ್ರಜ್ಞರನ್ನು ಕಲೆಹಾಕಿ ಅವರ ವಿದ್ವತ್ತನ್ನು ಕಲಾರಸಿಕರಿಗೆ ಪರಿಚಯಿಸಿ ಸಮ್ಮೇಳನದ ಪ್ರತಿ ಹಂತವೂ ಕುತೂಹಲಕಾರಿಯಾಗಿ, ಆಸಕ್ತಿದಾಯಕವಾಗಿ ಇರುವಂತೆ ಮಾಡಿ, ಶಾಸ್ತ್ರೀಯ ಸಂಗೀತದ ಸಂದರ್ಭಗಳಲ್ಲಿ ಕಂಡು ಕೇಳಿಲ್ಲದ ಸಂಭ್ರಮ, ಉತ್ಸಾಹ ಮತ್ತು ಲವಲವಿಕೆಗಳನ್ನು ತುಂಬಿದ ಆರ್ ಕೆ ಪಿ ಯವರ ಮಾದರಿ ಶಾಸ್ತ್ರೀಯ ಸಂಗೀತಕ್ಕೆ ಮಾತ್ರವಲ್ಲ – ಎಲ್ಲ ಕಲೆ, ನಾಟಕ ಮತ್ತು ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾಗಿ ನಿಲ್ಲುವಂಥದ್ದು.


ಗುರುವಾಗಿ ಆರ್ ಕೆ ಪಿ ಯವರ ಮಾದರಿಯೂ ಜಗತ್ತಿನ ಮುಂದಿದೆ. ಅವರ ಶಿಷ್ಯರೂ ಗುರುಗಳಂತೆ ಬಹುಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡು ವೇದಿಕೆಯಲ್ಲಷ್ಟೇ ಅಲ್ಲದೆ ತಮ್ಮ ಆಯ್ಕೆಯ ಇನ್ನಿತರ ಕ್ಷೇತ್ರಗಳಲ್ಲೂ ಹೆಸರು ಮಾಡಿರುವುದೂ ಎಲ್ಲರಿಗೂ ತಿಳಿದದ್ದೇ. ಇದರಲ್ಲಿ ಜಗತ್ತಿಗೆ ಅಷ್ಟಾಗಿ ಪರಿಚಯವಿಲ್ಲದ ಆಯಾಮವೂ ಒಂದಿದೆ. ಆರ್ ಕೆ ಪಿ ಅವರಿಗೆ ಎಲ್ಲ ವಯೋಮಾನದ ಶಿಷ್ಯರೂ ಇದ್ದಾರೆ. ಅವರುಗಳಲ್ಲಿ ಅನೇಕರು ಆರ್ ಕೆ ಪಿ ಯವರ ವ್ಯಕ್ತಿತ್ವದಿಂದ, ಅವರ ಉತ್ಸಾಹದಿಂದಲೇ ಆಕರ್ಷಿತರಾದವರು. ಆರ್ ಕೆ ಪಿ ಯವರು ಆಯೋಜಿಸುತ್ತಿದ್ದ ಶತ ಕಂಠ, ಸಹಸ್ರ ಕಂಠ ಗೋಷ್ಠಿಗಳಲ್ಲಿ ದನಿಯಾದವರು. ಇವರುಗಳು ವೇದಿಕೆಯಲ್ಲಿ ಬೆಳಗುವ ‘ತಾನ್ಸೇನ್’ ಗಳಾಗದಿರಬಹುದು. ಆದರೆ ಕಚೇರಿಗಳನ್ನು ನಿಯಮಿತವಾಗಿ ಕೇಳುವ ‘ಕಾನ್ಸೇನ್’ ಗಳಾಗುವುದಂತೂ ನಿಶ್ಚಿತ. ಇಂದು ಬೆಂಗಳೂರಿನ ಕಚೇರಿಗಳಲ್ಲಿ ಎಲ್ಲ ಕಡೆಯಲ್ಲೂ ಒಂದಷ್ಟು ಇಂಥ ಶ್ರೋತೃಗಳು ನಮಗೆ ಕಾಣಸಿಗುತ್ತಾರೆ. ಇವರ ಮನೆಗಳಲ್ಲಿ ಸಂಗೀತ ಪ್ರವಹಿಸುತ್ತದೆ. ಇವರ ಮಕ್ಕಳು, ಮೊಮ್ಮಕ್ಕಳು ಸಂಗೀತವನ್ನು ಗಂಭೀರವಾಗಿ ಕಲಿಯಲು, ಕೇಳಲು ತೊಡಗುತ್ತಾರೆ. ನನ್ನ ಸಂಬಂಧಿಕರೊಬ್ಬರು ಆರ್ ಕೆ ಪಿ ಯವರ ಪರಿಧಿಗೆ ಬರುವವರೆಗೆ ಶಾಸ್ತ್ರೀಯ ಸಂಗೀತವನ್ನು ಗಂಭೀರವಾಗಿ ಪರಿಗಣಿಸಿದ್ದವರಲ್ಲ. ಈಗ ಅವರು ಅಡುಗೆ ಮಾಡುವಾಗ ಆರ್ ಕೆ ಪಿ ಯವರ ಕಾರ್ಯಾಗಾರಗಳಲ್ಲಿ ಕಲಿತ ನವಾವರಣ ಕೃತಿಗಳನ್ನು ಹಾಡಿಕೊಳ್ಳುತ್ತಾರೆ. ಸಂಜೆಯ ವೇಳೆ ಹತ್ತಿರದ ಸಭಾಂಗಣಗಳಲ್ಲಿ ಜರುಗುವ ಕಚೇರಿಗಳಿಗೆ ಹಾಜರಾಗುತ್ತಾರೆ. ಇದು ಆರ್ ಕೆ ಪಿ ಯವರ ದೂರದರ್ಶಿತ್ವಕ್ಕೆ ಮತ್ತೊಂದು ಸಾಕ್ಷಿ. ಪರಿಷತ್ತಿನ ಸಮ್ಮೇಳನಗಳನ್ನು ಮೆಟ್ರೋಗಳಿಂದ ಆಚೆಗೆ ಕೊಂಡೊಯ್ದದ್ದೂ ಈ ದೂರದರ್ಶಿತ್ವದ ಮುಂದುವರಿಕೆಯೇ. ಶಾಸ್ತ್ರೀಯ ಸಂಗೀತ ಬೆಂಗಳೂರು ಮೈಸೂರಿನಂಥ ನಗರಗಳಿಗೆ ಮಾತ್ರ ಸೀಮಿತವಾಗಬಾರದು ಎಂಬ ಘನ ಉದ್ದೇಶವೂ ಆ ಪ್ರಯತ್ನಗಳಲ್ಲಿ ಇದೆ.
ಆರ್ ಕೆ ಪಿ ಯವರ ವ್ಯಕ್ತಿತ್ವವನ್ನು ಬಣ್ಣಿಸುವಾಗ ಆಯೋಜಕರಾಗಿ ಅವರ ಕೊಡುಗೆಗಳು, ಗುರುವಾಗಿ ಅವರು ನಿರ್ಮಿಸಿರುವ ಶಿಷ್ಯ ವೃಂದ, ಮುಂದಿನ ತಲೆಮಾರಿಗೆ ಅವರು ನಿರ್ಮಿಸಿರುವ ಸಂಗೀತ ದೇಗುಲ, ಭವನಗಳು – ಇವುಗಳೇ ಕೆಲವೊಮ್ಮೆ ಮುನ್ನೆಲೆಗೆ ಬಂದುಬಿಡುತ್ತವೆ. ಕಚೇರಿ ವಿದ್ವಾಂಸರಾಗಿ ಅವರ ಸಾಧನೆಗಳು ಮತ್ತು ಸಾಧ್ಯತೆಗಳು ಅಷ್ಟೇ ಗಮನಾರ್ಹ. ಕೆಲವು ವರ್ಷಗಳ ಹಿಂದೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭೆಯಲ್ಲಿ ಅವರಿಗೆ ‘ನಾದಬ್ರಹ್ಮ’ ಬಿರುದು ಪ್ರದಾನ ಮಾಡಿದ ನಂತರ ನಡೆದ ಕಚೇರಿಯನ್ನು ಇಲ್ಲಿ ಉದಾಹರಿಸುತ್ತೇನೆ. ಇಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಪ್ರಸ್ತಾಪಿಸಬೇಕಾಗುತ್ತದೆ – ಕರ್ನಾಟಕ ಸಂಗೀತದ ಪರಿಚಯ ಇಲ್ಲದ ಓದುಗರು ಐದಾರು ಸಾಲುಗಳ ಮಟ್ಟಿಗೆ ನನ್ನೊಂದಿಗೆ ಸಹಕರಿಸಬೇಕಾಗಿ ಕೋರುತ್ತೇನೆ. ಆರ್ ಕೆ ಪಿ ಯವರು ಹೆಚ್ಚಿನ ಕಚೇರಿಗಳಲ್ಲಿ ಸಂದರ್ಭಕ್ಕೆ ತಕ್ಕುದಾದ ಒಂದು ಕೃತಿಯನ್ನೋ ಅಥವಾ ಪಲ್ಲವಿಯನ್ನೋ ಹೆಣೆದು ಪ್ರಸ್ತುತ ಪಡಿಸುತ್ತಾರೆ. ಅಂದಿನ ಕಚೇರಿಯಲ್ಲಿ ‘ನಾದಬ್ರಹ್ಮ’ ಎಂಬ ಪದದ ಸುತ್ತಲೇ ಹೆಣೆದ ಪಲ್ಲವಿ. ಪಲ್ಲವಿಯನ್ನು ಕಟ್ಟಿದ್ದು ಹಿಂದೆ ಕಂಡರಿಯದ ೧೭ ಅಕ್ಷರಗಳ ತಾಳದಲ್ಲಿ. ಮಿಶ್ರ ಜಾತಿ ಜಂಪೆ ತಾಳದಲ್ಲಿ ಪೂರ್ವಾರ್ಧ(ಲಘು) ಎರಡು ಕಳೆಗಳಲ್ಲಿ ಮತ್ತು ಉತ್ತರಾರ್ಧ (ಅನುಧೃತ ಮತ್ತು ಧೃತ) ಒಂದು ಕಳೆಯಲ್ಲಿ. ಪಲ್ಲವಿಯ ವಿನ್ಯಾಸ ಆರಂಭವಾದ ಮೊದಲ ಎರಡು ನಿಮಿಷ ಪಕ್ಕವಾದ್ಯದವರು (ಆರ್ ಕೆ ಪಿ ಯವರಿಗೆ ಸಾಮಾನ್ಯವಾಗಿ ನುಡಿಸುವ ವಿದ್ವಾನ್ ಸಿ ಎನ್ ಚಂದ್ರಶೇಖರ್, ವಿದ್ವಾನ್ ಚೆಲುವರಾಜು ಮತ್ತು ವಿದ್ವಾನ್ ಜಿ ಎಸ್ ರಾಮಾನುಜಂ) ಯಾರೂ ನುಡಿಸುವ ಸಾಹಸ ಮಾಡಲಿಲ್ಲ. ಸಭಾಸದರ ಪೈಕಿ ಅನೇಕ ವಿದ್ವಾಂಸರಿದ್ದರು – ಯಾರಿಗೂ ಏನು ಘಟಿಸುತ್ತಿದೆಯೆಂದು ಭಾಸವಾಗಲಿಲ್ಲ. ಆರ್ ಕೆ ಪಿ ಯವರು ಮಾತ್ರ ಲೀಲಾಜಾಲವಾಗಿ ಹಾಡುತ್ತಲೇ ಹೋದರು. ಹಿಂದೆ ಕುಳಿತಿದ್ದ ಶಿಷ್ಯ ಕೀರ್ತಿ ಮಾತ್ರ ಮುಗುಳ್ನಗುತ್ತಾ ತಾಳ ಹಾಕುತ್ತಿದ್ದ. ನಿಧಾನವಾಗಿ ಪಕ್ಕ ವಾದ್ಯದವರು ಒಬ್ಬೊಬ್ಬರಾಗಿ ಸೇರಿಕೊಂಡರು – ಅದೂ ಮೈಯೆಲ್ಲಾ ಕಣ್ಣಾಗಿ. ಆರ್ ಕೆ ಪಿ ಯವರು ಸುಲಲಿತವಾಗಿ ವಿನ್ಯಾಸ ಮಾಡಿ ಮಕ್ಕಳಾಟದಂತೆ ತ್ರಿಕಾಲ ಮಾಡಿ ಸ್ವರ ಕಲ್ಪನೆ ಮಾಡಿದರು. ಅಷ್ಟು ಹೊತ್ತಿಗೆ ಪಕ್ಕವಾದ್ಯ ವಿದ್ವಾಂಸರಿಗೂ ಒಂದು ಅಂದಾಜು ಸಿಕ್ಕಿತ್ತು – ಕಚೇರಿ ಕಳೆಗಟ್ಟುವಂತೆ ಅವರು ತನಿ ಆವರ್ತನವನ್ನೂ ನುಡಿಸಿದರು.


ನಾನು ಕಚೇರಿಯ ಮಾರನೆಯ ದಿನ ವಿದ್ವಾನ್ ಚೆಲುವರಾಜು ಅವರಿಗೆ ಕರೆ ಮಾಡಿದೆ – ಅಗ್ನಿ ಪರೀಕ್ಷೆಯನ್ನು ಹೇಗೆ ಎದುರಿಸಿದರೆಂದು ತಿಳಿದುಕೊಳ್ಳಲು. ಅವರು ಆಗ ಆರ್ ಕೆ ಪಿ ಅವರು ಅವರಿಗೆ ಆಗಾಗ್ಗೆ ಒಡ್ಡಿದ್ದ ಅನೇಕ ಪರೀಕ್ಷೆಗಳನ್ನು ಪಟ್ಟಿ ಮಾಡಿದರು. ಶಿಷ್ಯರನ್ನು ಒಡ್ಡುವಂತೆಯೇ ಪಕ್ಕವಾದ್ಯ ವಿದ್ವಾಂಸರನ್ನೂ ಪರೀಕ್ಷೆಗೆ ಒಡ್ಡಿ ಅವರ ಗೆಲುವನ್ನೂ ವೇದಿಕೆಯ ಮೇಲೆಯೇ ಸಂಭ್ರಮಿಸುತ್ತಾರೆ. ನನ್ನಂಥವರು ಅಂಥದ್ದೊಂದು ಪಲ್ಲವಿಯನ್ನು ಹಾಡಬೇಕಾದರೆ ತಿಂಗಳುಗಟ್ಟಲೆ ತಿಣುಕಾಡಿ ಪಕ್ಕವಾದ್ಯಗಾರರೊಂದಿಗೆ ಒಂದೆರಡು ಬಾರಿ ಅಭ್ಯಾಸಕ್ಕೆ ಕುಳಿತು ವೇದಿಕೆಗೆ ಹೋಗುತ್ತೇವೆ. ಆದರೆ ಆರ್ ಕೆ ಪಿ ಯವರಿಗೆ ಅದು Just Another Day in Office -ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಪಲ್ಲವಿಯನ್ನು ಹೆಣೆದಿರುತ್ತಾರೆ, ಅದನ್ನು ಒಮ್ಮೆ ಶಿಷ್ಯನಿಗೆ ಹಾಡಿ ತೋರಿಸಿರುತ್ತಾರೆ ಮತ್ತು ಯಾವುದೇ ವಿಶೇಷ ನಡೆಯುತ್ತಿಲ್ಲವೆಂಬಂತೆ ಅದನ್ನು ಕಚೇರಿಯಲ್ಲಿ ಹಾಡಿರುತ್ತಾರೆ. ಆದರೆ ಅದರ ಹಿಂದೆ ಇರುವ ವರ್ಷಗಟ್ಟಲೆ ತಪಸ್ಸನ್ನು ವಿದ್ವಾಂಸರು ಮಾತ್ರ ಅರಿಯಬಲ್ಲರು. ಅವರ ಪರಿಣತಿ ಲಯಸಂಬಂಧಿ ವಿಷಯಗಳಿಗೆ ಮಾತ್ರ ಸೀಮಿತವಾದದ್ದಲ್ಲ. ದೈವದತ್ತವಾಗಿ ಬಂದ ಕಂಚಿನ ಕಂಠವನ್ನು ಅವರು ತಪಸ್ಸಿನಿಂದ ಹುರಿಗೊಳಿಸಿದ್ದಾರೆ. ಅವರು ಆ ಕಂಠದಲ್ಲಿ ಲಯದ ಜಟಿಲ ಕೆಲಸಗಳನ್ನು ಮಾಡಿದರೂ ಸೊಗಸುತ್ತದೆ, ಭಾವಪೂರ್ಣವಾಗಿ ಉಗಾಭೋಗ ಹಾಡಿ ದೇವರನಾಮ ಹಾಡಿದರೂ ಕಂಬನಿ ಮಿಡಿಯುತ್ತದೆ.


ಹೊರಪ್ರಪಂಚದಲ್ಲಿ ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಆರ್ ಕೆ ಪಿ ಯವರ ಅಂತರಂಗದಲ್ಲಿರುವ ಮಾತೃ ಹೃದಯವನ್ನೂ ನಾನು ಕಂಡಿದ್ದೇನೆ. ಅವರು ಮೈಸೂರಿಗೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ಶಿಷ್ಯೆ ರತ್ನಮಾಲಾ ಮತ್ತು ರಾಘವನ್ ದಂಪತಿಗಳ ಮನೆಯಲ್ಲಿ. ಕರೋನಾ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ದಂಪತಿಗಳಿಬ್ಬರೂ ಸೋಂಕಿಗೀಡಾದರು. ನಾನು ಮತ್ತು ಆರ್ ಕೆ ಪಿ ನಮಗಿದ್ದ ಸಂಪರ್ಕ, ವಶೀಲಿಗಳೆಲ್ಲವನ್ನೂ ಬಳಸಿ ಹೇಗೋ ಕಾಮಾಕ್ಷಿ ಆಸ್ಪತ್ರೆಯಲ್ಲಿ ಒಂದೆರಡು ಹಾಸಿಗೆಗಳನ್ನು ಗಿಟ್ಟಿಸಿದೆವು. ಆರ್ ಕೆ ಪಿ ದಿನಕ್ಕೆ ಮೂರು ಬಾರಿ ನನಗೂ ವೈದ್ಯರಿಗೂ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಆದರೆ ರತ್ನಮಾಲಾ ಅವರ ದೇಹಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು ಮತ್ತು ಆಸ್ಪತ್ರೆಗೆ ಸೇರಿದ ಮೂರೇ ದಿನಗಳಲ್ಲಿ ಸೋಂಕು ಅವರನ್ನು ಬಲಿ ತೆಗೆದುಕೊಂಡಿತು. ಆರ್ ಕೆ ಪಿ ಭಾವನಾತ್ಮಕವಾಗಿ ಕುಸಿದು ಹೋದರು. ಒಂದಷ್ಟು ದಿನ ಅವರು ಮಾತನಾಡುವ ಮನಸ್ಥಿತಿಯಲ್ಲೂ ಇರಲಿಲ್ಲ. ಆಸ್ಪತ್ರೆಯಿಂದ ರಾಘವನ್ ಗುಣಮುಖರಾಗಿ ಹಿಂದಿರುಗಿದ ಮೇಲೆ ಆರ್ ಕೆ ಪಿ ಯವರು ಸ್ವಲ್ಪ ಚೇತರಿಸಿಕೊಂಡರು. ಅವರ ಎಲ್ಲ ಶಿಷ್ಯರೊಂದಿಗೂ ಆರ್ ಕೆ ಪಿ ಇಂಥದ್ದೇ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಪೋಷಕರು ನೋಡಿಕೊಳ್ಳುವಂತೆ ಶಿಷ್ಯರ ಜೀವನದ ಆಗು ಹೋಗುಗಳ ಬಗ್ಗೆ ಕಾಳಜಿ ವಹಿಸುತ್ತಾರೆ.


ಸಂಗೀತವು ಆರ್ ಕೆ ಪಿ ಅವರ ಜೀವನದ ಪ್ರತಿಯೊಂದು ಮಗ್ಗುಲನ್ನೂ ಹೇಗೆ ಆವರಿಸಿದೆ ಎಂಬ ಬಗ್ಗೆ ಒಂದೆರಡು ಮಾತನ್ನು ಹೇಳಿ ಲೇಖನವನ್ನು ಮುಗಿಸುತ್ತೇನೆ. ಹುಳಿಮಾವಿನಲ್ಲಿ ವಾದಿರಾಜ ಕಲಾ ಭವನ ಉದ್ಘಾಟನೆಯಾದ ಸಂದರ್ಭದಲ್ಲಿ ಬನ್ನೇರುಘಟ್ಟ ರಸ್ತೆ ಹದಗೆಟ್ಟಿತ್ತು. ರಸ್ತೆ ಸರಿ ಮಾಡಿಸಲು ಆಗ ಆಡಳಿತಕ್ಕೆ ಮನವರಿಕೆ ಮಾಡಿಕೊಡಲು ಆರ್ ಕೆ ಪಿ ಶಿಷ್ಯರೊಂದಿಗೆ ರಸ್ತೆಯ ಹೊಂಡದಲ್ಲೇ (pot hole) ಕುಳಿತು ಹಾಡಿದ್ದರು. ಈಚೆಗೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆದಾಗಲೂ ಲಾಲ್ ಬಾಗ್ ನಲ್ಲಿ ಗೋಷ್ಠಿಯನ್ನು ಆಯೋಜಿಸಿ ಹಾಡಿದ್ದ ವೀಡಿಯೊ ವೈರಲ್ ಆಗಿತ್ತು. ಹೀಗೆ ಅವರ ಜೀವನದಲ್ಲಿ ಪ್ರತಿಭಟನೆಯೂ ಸಂಗೀತದ ಮೂಲಕವೇ, ಸಂಭ್ರಮವೂ ಸಂಗೀತದ ಮೂಲಕವೇ, ಶೋಕಾಚರಣೆಯೂ ಸಂಗೀತದ ಮೂಲಕವೇ. ಅವರು ಇನ್ನೂ ನೂರ್ಕಾಲ ಹಾಡುತ್ತಾ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿರಲಿ ಎಂದು ಆಶಿಸುತ್ತೇನೆ.