CNT ಎಂಬ ಅನೂಹ್ಯ ಪ್ರತಿಭೆ

(ಖ್ಯಾತ ವಯಲಿನ್ ವಿದ್ವಾಂಸರಾದ ಸಿ ಎನ್ ತ್ಯಾಗರಾಜು ಅವರು ತೀರಿಕೊಂಡಾಗ ಬರೆದ ಲೇಖನ)

ಮೂರು ದಿನಗಳ ಹಿಂದೆ CNT (ಸಿ ಎನ್ ತ್ಯಾಗರಾಜು) ಇನ್ನಿಲ್ಲವೆಂಬ ಸುದ್ದಿ ಧುತ್ತನೆ ಎರಗಿದಾಗ ನನ್ನ ಮೊದಲ ಪ್ರಾರ್ಥನೆ ಈ ಸುದ್ದಿ ನಿಜವಾಗಿಲ್ಲದಿರಲಿ ಎಂದು. ನಿಮಿಷಗಳು ಉರುಳಿದಂತೆ ವಾಟ್ಸಾಪಿನಲ್ಲಿ RIP, ಸದ್ಗತಿ, ಓಂ ಶಾಂತಿ ಎಂಬ ಸಂದೇಶಗಳು ಬರಲು ಆರಂಭಿಸಿದಾಗ ಈ ವಿಷಯವನ್ನು ಅರಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂಬ ಅರಿವೂ ಮೂಡಿತು.
ನಿಜ, ಕಳೆದೆರಡು ವರ್ಷಗಳಲ್ಲಿ ಅವರು ಕಚೇರಿಗಳನ್ನು ನಿರಾಕರಿಸುತ್ತಿದ್ದರು ಮತ್ತು ಕೆಲವು ತಿಂಗಳುಗಳಿಂದ ಶಿಷ್ಯರನ್ನು ಭೇಟಿಯಾಗುವುದನ್ನೂ ನಿಲ್ಲಿಸಿಬಿಟ್ಟಿದ್ದರು. ಅವರು ಹೇಳಿಕೊಳ್ಳುತ್ತಿದ್ದ ಬೆನ್ನು ನೋವಿನಿಂದಾಚೆಗೆ ಮತ್ತೇನೋ ಗಂಭೀರವಾದ ಸಮಸ್ಯೆ ಇರಬಹುದು ಎಂಬ ಗುಮಾನಿಯೂ ನಮ್ಮಲ್ಲಿ ಅನೇಕರಲ್ಲಿ ಇತ್ತು. ಅಪರೂಪಕ್ಕೊಮ್ಮೆ ಯಾರನ್ನಾದರೂ ಭೇಟಿಯಾದಾಗ ಅವರು ‘all is well’ ಎಂಬ ಸಂದೇಶವನ್ನೇ ರವಾನಿಸುತ್ತಿದ್ದರೇ ವಿನಾ ಅವರು ಅನುಭವಿಸುತ್ತಿದ್ದ ನೋವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ.

‘ಅನೂಹ್ಯ’ ಎಂಬ ಪದಕ್ಕೆ ಸುಲಭ ಗ್ರಾಹ್ಯವಲ್ಲದ್ದು, ತರ್ಕಕ್ಕೆ ನಿಲುಕದದ್ದು ಎಂಬಿತ್ಯಾದಿ ಅರ್ಥಗಳಿವೆ. ಈ ಪದವನ್ನು ಅವರ ಪ್ರತಿಭೆಗೂ, ವ್ಯಕ್ತಿತ್ವಕ್ಕೂ ಒಮ್ಮೆಲೇ ಅನ್ವಯಿಸಬಹುದು. ಅವರು ಸಿಂಗಪುರದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಮೈಸೂರಿನಲ್ಲಿ ನೆಲೆಸಲು ತೀರ್ಮಾನಿಸಿದ್ದರು. ಅದು ಮೈಸೂರಿನ ಕಲಾವಿದರ, ಕಲಾರಸಿಕರ ಸೌಭಾಗ್ಯ. ಅವರ ಪ್ರತಿಭೆಯ ಹರಹಿಗೆ ಮದರಾಸೋ, ಬೆಂಗಳೂರೋ ಹೆಚ್ಚು ಸೂಕ್ತವಾಗಿದ್ದವೇನೋ. ಆದರೂ ಅವರು ಮೈಸೂರಿನ ಹೆಚ್ಚು ಪ್ರಶಾಂತವಾದ ವಾತಾವರಣವನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರ ಪ್ರತಿಭೆಯ ಬೇರೆ ಬೇರೆ ಆಯಾಮಗಳ ಅನಾವರಣಕ್ಕೆ ಮೈಸೂರು ಸಾಕ್ಷಿಯಾಯಿತು. ಅವರೊಂದಿಗಿನ ೧೪-೧೫ ವರ್ಷಗಳ ಒಡನಾಟದಲ್ಲಿ ನಾನು ಕಂಡುಕೊಂಡ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಪ್ರಾಯಶಃ ಅವರೊಂದಿಗೆ ಆತ್ಮೀಯವಾಗಿ ಒಡನಾಡಿದ ಕಲಾವಿದರೆಲ್ಲರೂ ನನ್ನ ಮಾತುಗಳಿಗೆ ದನಿಗೂಡಿಸಬಹುದು.

ನಾನು ಅವರಲ್ಲಿ ಅತಿ ಹೆಚ್ಚು ಗೌರವಿಸುತ್ತಿದ್ದ ಅಂಶ ಪಕ್ಕವಾದ್ಯ ಕಲಾವಿದರಾಗಿ ಅವರ integrity – ದೃಢತೆ ಎಂದು ಕನ್ನಡಕ್ಕೆ ಅನುವಾದಿಸಬಹುದೇನೋ. ಒಮ್ಮೆ ಅವರು ಒಂದು ಕಾರ್ಯಕ್ರಮವನ್ನು ಒಪ್ಪಿಕೊಂಡರೆಂದರೆ ಮುಗಿಯಿತು. ಅವರು ಆ ದಿನಾಂಕದಲ್ಲಿ ಬಂದ ಮತ್ತೆಲ್ಲ ಕಾರ್ಯಕ್ರಮಗಳನ್ನು ಮುಲಾಜಿಲ್ಲದೆ ನಿರಾಕರಿಸುತ್ತಿದ್ದರು. ಆ ಕಾರ್ಯಕ್ರಮ ಸಣ್ಣದಿರಲಿ/ದೊಡ್ಡದಿರಲಿ, ಕಡಿಮೆ ಸಂಭಾವನೆಯದ್ದಾಗಿರಲಿ/ದೊಡ್ಡ ಸಂಭಾವನೆಯದ್ದಾಗಿರಲಿ, ನೃತ್ಯ ಕಾರ್ಯಕ್ರಮವಿರಲಿ/ಸಂಗೀತ ಕಚೇರಿಯಾಗಿರಲಿ, ಉದಯೋನ್ಮುಖ ಕಲಾವಿದರ ಕಾರ್ಯಕ್ರಮವಾಗಿರಲಿ/ಹಿರಿಯ ಕಲಾವಿದರ ಕಾರ್ಯಕ್ರಮವಾಗಿರಲಿ ಅವರು ಕೊಟ್ಟ ಮಾತನ್ನು ಹಿಂದೆಗೆದುಕೊಳ್ಳುತ್ತಲೇ ಇರಲಿಲ್ಲ. ಅವರು ಸಂಗೀತ ಕಚೇರಿಗಳಲ್ಲಿ ಪಿಟೀಲು ವಾದಕರಾಗಿಯೂ, ನೃತ್ಯ ಕಾರ್ಯಕ್ರಮಗಳಲ್ಲಿ ಕೊಳಲು ವಾದಕರಾಗಿಯೂ ಬಹು ಬೇಡಿಕೆಯ ಕಲಾವಿದರಾಗಿದ್ದರಿಂದ ಅವರು ಒಪ್ಪಿಕೊಳ್ಳಬಹುದಾದ ಕಾರ್ಯಕ್ರಮಗಳ ಸಂಖ್ಯೆಗಿಂತ ನಿರಾಕರಿಸಬೇಕಾದ ಕಾರ್ಯಕ್ರಮಗಳ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಆದರೆ CNT ಕಾರ್ಯಕ್ರಮವನ್ನು ಒಪ್ಪಿಕೊಂಡ ಮೇಲೆ ಮುಖ್ಯ ಕಲಾವಿದರು, ಆಯೋಜಕರು ನಿರಾಳವಾಗಿರಬಹುದಿತ್ತು.

ಎರಡನೆಯದು – ಅವರು ಕಾರ್ಯಕ್ರಮದ ಸಂಭಾವನೆಯನ್ನೇ ವಿಚಾರಿಸುತ್ತಿರಲಿಲ್ಲ! ಆಯೋಜಕರು/ಮುಖ್ಯ ಕಲಾವಿದರು ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಾರೆಂಬ ದೃಢ ನಂಬಿಕೆ ಅವರದ್ದು. ಈ ನಂಬಿಕೆಯು ಹುಸಿಯಾದ ಅನೇಕ ನಿದರ್ಶನಗಳಿದ್ದಿರಬೇಕು. ನನ್ನ ಒಡನಾಟದ ಅಷ್ಟೂ ವರ್ಷಗಳಲ್ಲಿ ಈ ಬಗ್ಗೆ ಅವರು ಒಮ್ಮೆಯೂ ಹಲುಬಿದ್ದನ್ನು ಕೇಳಲಿಲ್ಲ. ಮೇಲಿನ ಎರಡೂ ಅಂಶಗಳು ಅವರ ವ್ಯಕ್ತಿತ್ವದಲ್ಲಿ ಹಾಸುಹೊಕ್ಕಿದ್ದರಿಂದ ಅವರು ಯಾವ ಕಾರ್ಯಕ್ರಮವನ್ನು ಒಪ್ಪಿಕೊಂಡರೂ ಅಲ್ಲಿಯೇ ಶತ ಪ್ರತಿಶತ ತೊಡಗಿಕೊಂಡಿರುತ್ತಿದ್ದರು. ನಾನು ಇಲ್ಲಿಲ್ಲದೆ ಮತ್ತೆಲ್ಲೋ ಇರಬೇಕಿತ್ತು ಎಂಬ ಯೋಚನೆಯೇ ಅವರಿಗೆ ಸುಳಿಯುತ್ತಿರಲಿಲ್ಲ!

ಮೂರನೆಯದು – ಅವರು ಹಾಡುತ್ತಿದ್ದ/ನುಡಿಸುತ್ತಿದ್ದ/ನೃತ್ಯ ಮಾಡುತ್ತಿದ್ದ ಕಲಾವಿದರು ಹಿರಿಯರೋ ಅಥವಾ ಕಿರಿಯರೋ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಹೊರ ಊರಿನ ಕಚೇರಿಯಾದರೆ ತಾವೇ ಕರೆ ಮಾಡಿ ಪ್ರಯಾಣದ ವಿವರಗಳನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ನಾನು ಅವರೊಂದಿಗೆ ನನ್ನ ಹರಕು-ಮುರುಕು ತಮಿಳಿನಲ್ಲೇ ಮಾತನಾಡುತ್ತಿದ್ದೆ. ಕಚೇರಿಯ ದಿನ ಬೆಳಿಗ್ಗೆ ಅವರ ಕರೆ ಇದ್ದೇ ಇರುತ್ತಿತ್ತು – ‘ಕಾಲೈ ವಣಕ್ಕಂ ತಂಬಿ! ಇನ್ನಿಕಿ ಎನ್ನ ಪಾಡ ಪೋರೇಳ್? ಸ್ಪೆಷಲ್ ಎದಾ ಇರುಕ್ಕಾ? ಪಲ್ಲವಿ ಪಾಡ ಪೋರೇಳಾ? (ಸುಪ್ರಭಾತ ತಮ್ಮ! ಇವತ್ತು ಏನೇನು ಹಾಡುತ್ತಿದ್ದೀಯೆ? ವಿಶೇಷವಾಗಿ ಏನಾದರೂ ಹಾಡುತ್ತಿದ್ದೀಯಾ? ಪಲ್ಲವಿ ಇದೆಯಾ?) ಎಂಬಿತ್ಯಾದಿ. ಪಲ್ಲವಿ ಹಾಡುತ್ತಿದ್ದರೆ ಅದರ ರೆಕಾರ್ಡಿಂಗ್ ತರಿಸಿಕೊಂಡು ಅವರಿಗೆ ಲಯಸಂಬಂಧಿಯಾದ ವಿಷಯಗಳು ಸ್ಫುರಿಸಿದ್ದರೆ ಅದನ್ನು ಕಳಿಸಿ ಹಾಡು ಎಂದು ತಾಕೀತು ಮಾಡುತ್ತಿದ್ದರು. ಕೆಲವೊಮ್ಮೆ ಕುರೈಪ್ಪು ಮತ್ತು ಮುಕ್ತಾಯವನ್ನು ಅವರೇ ನಿರ್ಧರಿಸಿ ಅದು ಪ್ರಯೋಗವಾಗುವಂತೆ ನೋಡಿಕೊಳ್ಳುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ಒಂದೆರಡು ಅಭ್ಯಾಸದ ಅವಧಿಗೆ ಬರಲೂ ಹಿಂಜರಿಯುತ್ತಿರಲಿಲ್ಲ.
ಅವರ ಲಯಸಂಬಂಧಿ ಆಸಕ್ತಿಗೆ ಸೂಕ್ತ ವೇದಿಕೆಯಾದದ್ದು ಶಿವು ಅವರ ಲಯಲಹರಿ ಕಾರ್ಯಕ್ರಮಗಳು. CNT ಹಾಗೂ ಅವರ ಪ್ರೀತಿಯ ಶಿವಾಜಿಯ ಒಡನಾಟದಲ್ಲಿ ಹತ್ತಾರು ಯಶಸ್ವಿ ಲಯಲಹರಿ ಕಾರ್ಯಕ್ರಮಗಳಾದವು. ಪ್ರಯಾಣಗಳಲ್ಲಿ ಅವರಷ್ಟೇ ಲಯದ ಆಸಕ್ತಿ ಇದ್ದ ಸ್ನೇಹಿತರಿದ್ದರಂತೂ ಮುಗಿಯಿತು – ದಾರಿಯಿಡೀ ತಧಿಗಿಣತೋಮ್ ತರ್ಕಗಳೇ! ನಾನು ಮೂಡಬಿದರೆಯಲ್ಲಿ ‘ನುಡಿಸಿರಿ’ ಕಾರ್ಯಕ್ರಮಕ್ಕೆ ಹೋಗಿದ್ದಾಗ ಗೆಳೆಯ ಸಾಯಿಶಿವು ಮತ್ತು CNT ಮುಕ್ತಾಯಗಳ ಸಮಾರಾಧನೆ ನಡೆಸಿದರು. ಸಮಾರಾಧನೆ ನಿಂತದ್ದು ನಾವು ಮೈಸೂರಿಗೆ ಹಿಂದಿರುಗಿ ನಮ್ಮ ನಮ್ಮ ಹಾದಿ ಹಿಡಿದಾಗಲೇ!

ನಾಲ್ಕನೆಯದು – ವೇದಿಕೆಯಲ್ಲಾಗಲಿ, ಪ್ರಯಾಣಗಳಲ್ಲಾಗಲಿ ಅವರು ವಾತಾವರಣ ಬಿಗಿಯಾಗಲು ಬಿಡುತ್ತಲೇ ಇರಲಿಲ್ಲ. ಬಹಳ ಸೀರಿಯಸ್ ಆದ ಆಲಾಪನೆಯಲ್ಲೂ ಅವರು ಒಮ್ಮೊಮ್ಮೆ ಸಿನೆಮಾ ಹಾಡಿನ ಝಲಕ್ ತೋರಿಸಿಬಿಡುತ್ತಿದ್ದರು. ಶಾಸ್ತ್ರೀಯತೆ ತುಂಬಿದ್ದ ಸಂದರ್ಭಗಳಲ್ಲೂ ಅವರು ಒಂದೆರಡು ಪಾಶ್ಚಾತ್ಯ ಸಂಗೀತದ ವರಸೆಗಳನ್ನು ಹರಿಯಬಿಡುತ್ತಿದ್ದರು. ಪ್ರಾಯಶಃ ಅವರ ಈ ಪ್ರವೃತ್ತಿಯಿಂದ ಅವರು ಕಲಾವಿದರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದರೇನೋ. ಆದರೆ ಅವರ ನಿಕಟ ಸಂಪರ್ಕವಿರುವ ಎಲ್ಲರೂ ಅವರ ಈ ಪ್ರಯೋಗಗಳಲ್ಲಿನ ಮುಗ್ಧತೆಯನ್ನು ಗಮನಿಸಿಕೊಳ್ಳುತ್ತಿದ್ದರು. ಹತ್ತಾರು ಸಂದರ್ಭಗಳಲ್ಲಿ ನಾನು ಅವರು ಮುಖಾರಿ, ಯದುಕುಲ ಕಾಂಭೋಜಿ, ಆನಂದ ಭೈರವಿಯಂಥ ರಕ್ತಿ ರಾಗಗಳ ಸತ್ವವನ್ನೇ ಹಿಂಡಿದ್ದನ್ನೂ ನೋಡಿದ್ದೇನೆ. ಅಷ್ಟೇ ಸಂದರ್ಭಗಳಲ್ಲಿ ಅವರು ವಾತಾವರಣವನ್ನು ತಿಳಿಗೊಳಿಸಲು ಅಪ್ರಸ್ತುತವೆಂದೆನಿಸಬಹುದಾದ ಸಂಗತಿಗಳನ್ನು ಪ್ರಯೋಗಿಸಿದ್ದನ್ನೂ ನೋಡಿದ್ದೇನೆ. ಅವರಿದ್ದದ್ದೇ ಹಾಗೆ.

ಐದನೆಯದು – ಅವರಲ್ಲಿ ತಾನೊಬ್ಬ ಮಹಾನ್ ಕಲಾವಿದನೆಂಬ ಬಿಗುಮಾನ ಲವಲೇಶವೂ ಇರಲಿಲ್ಲ. ನನ್ನ ರೆಕಾರ್ಡಿಂಗ್ ಪ್ರಾಜೆಕ್ಟ್ ಒಂದರಲ್ಲಿ ಅವರು ಶಿವರಂಜನಿ ಆಲಾಪನೆ ನುಡಿಸಿದಾಗ ಅಲ್ಲಿದ್ದವರೆಲ್ಲರೂ ಕಣ್ಣೀರುಗರೆದಿದ್ದರು. ಆದರೆ ಸಿಡಿಯು ಅಂತಿಮ ರೂಪ ಪಡೆಯುವಾಗ ಸಮಯದ ನಿರ್ಬಂಧನೆಯಿಂದ ಆ ಭಾಗವನ್ನು ತೆಗೆದು ಹಾಕಬೇಕಾಯಿತು. ಆ ಭಾಗವನ್ನು ತೆಗೆಯುತ್ತಿದ್ದೇವೆಂದು ನಾವು ಹೇಳಿದಾಗ ಅವರು ಒಂದಿನಿತೂ ಬೇಸರಿಸಿಕೊಳ್ಳಲಿಲ್ಲ. ತಾವು ಶಕ್ತ್ಯನುಸಾರ ಯೋಜನೆಗೆ ಸಹಕರಿಸಿದ್ದೇನೆಂಬುದೇ ಅವರಿಗೆ ಮುಖ್ಯವಾಗಿತ್ತು.

ಆರನೆಯದು – ಅವರು ಒಮ್ಮೆಯೂ ಯಾವ ಕಲಾವಿದರ ಬಗ್ಗೆಯೂ ಸಣ್ಣ ಮಾತನ್ನಾಡಿದ್ದನ್ನೇ ಕೇಳಲಿಲ್ಲ. ಎಲ್ಲ ಹಿರಿಯ ಕಲಾವಿದರ ಬಗ್ಗೆಯೂ ಅಭಿಮಾನದಿಂದಲೇ ಮಾತನಾಡುತ್ತಿದ್ದರು. ವಾತಾವರಣವನ್ನು ತಿಳಿಯಾಗಿಸಲು ಅವರು ಕಲಾವಿದರ ಕುರಿತಾದ ಹಾಸ್ಯ ಪ್ರಸಂಗಗಳನ್ನು ಹೇಳುತ್ತಿದ್ದರೇ ವಿನಾ ಯಾವ ಕಲಾವಿದನ ಬಗ್ಗೆಯೂ ಅಗೌರವದ ಮಾತನ್ನಾಡುತ್ತಿರಲಿಲ್ಲ. ಯಾರ ಸಂಗೀತವನ್ನೂ/ನೃತ್ಯವನ್ನೂ ವಿಮರ್ಶಿಸುತ್ತಿರಲಿಲ್ಲ. ಅಸೂಯೆಯ/ಅಸಮಾಧಾನದ ಜಾಡೇ ಅವರಲ್ಲಿದ್ದಂತೆ ತೋರಲಿಲ್ಲ.
ಕಲಾವಿದನಾಗಿ ಇಷ್ಟೆಲ್ಲ ಅಪರೂಪದ ಗುಣಗಳನ್ನು ಹೊಂದಿದ್ದ CNT ತಮ್ಮ ಮಕ್ಕಳು ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಲು ಉತ್ಸುಕತೆ ತೋರಿಸಲಿಲ್ಲವೆಂಬುದು ನನ್ನ ಮಟ್ಟಿಗೆ ವಿಷಾದದ ಸಂಗತಿಯೇ. ತಾವು ಪಟ್ಟ ಪಾಡು ತಮ್ಮ ತಲೆಮಾರಿಗೆ ಸಾಕು ಎಂದು ಅವರು ಭಾವಿಸಿದ್ದರೆಂದು ತೋರುತ್ತದೆ. ಹೆಣ್ಣುಮಕ್ಕಳಿಬ್ಬರೂ ಹಾಡಬಲ್ಲವರು – ಆದರೆ ಅರ್ಚನಾ ವೈದ್ಯೆಯಾಗಿಯೂ, ಅರುಣಾ ಎಂಜಿನಿಯರ್ ಆಗಿಯೂ ವೃತ್ತಿಯನ್ನು ಆರಂಭಿಸುತ್ತಿದ್ದಾರೆ. ಮಗ ಅಚ್ಯುತನಂತೂ ಸಣ್ಣ ವಯಸ್ಸಿನಲ್ಲಿ ಎಡಗೈಯಲ್ಲಿ ಕೊಳಲು ಹಿಡಿದ ಕೃಷ್ಣನಂತೆಯೇ ಕಾಣುತ್ತಿದ್ದ. ಈಗ ಅವನೂ ಐಐಟಿ ಭುವನೇಶ್ವರದಲ್ಲಿ ಓದುತ್ತಿದ್ದಾನೆ. ಮಕ್ಕಳೆಲ್ಲರೂ ತಂದೆಯನ್ನು ಅಂಟಿಕೊಂಡಿದ್ದವರೇ. ಅವರಿಗೂ, CNTಯವರ ಮನೆಯವರಿಗೂ ಈ ಆಘಾತದಿಂದ ಹೊರಬರಲು ವರ್ಷಗಳೇ ಬೇಕಾಗುತ್ತವೆ. ಈ ಸಂದರ್ಭದಲ್ಲಿ ನಾವು ಒಂದಷ್ಟು ಅವರ ದುಃಖವನ್ನು ಹಂಚಿಕೊಳ್ಳೋಣ. ನಮ್ಮ ಪ್ರಾರ್ಥನೆಗಳಲ್ಲಿ ಅವರ ಕುಟುಂಬಕ್ಕೆ ಒಂದಿನಿತು ಜಾಗ ಮಾಡಿಕೊಡೋಣ.